Sunday, January 31, 2016

ಈ ತಾಣದ ಬಗ್ಗೆ...

ಪುಲಿಗೆರೆ, ಹುಲಿಗೆರೆ, ಲಕ್ಶ್ಮೀಪುರ ಅಂತೆಲ್ಲಾ ಕರೆಸಿಕೊಂಡು ಇತಿಹಾಸ ಪ್ರಸಿದ್ಧವಾದ ಈಗಿನ ಲಕ್ಷ್ಮೇಶ್ವರ ಗದಗ ಜಿಲ್ಲೆಯಲ್ಲಿದೆ. ನಮ್ಮ ಊರು ಇಷ್ಟವಾಗುವುದಕ್ಕೆ ಎಷ್ಟೋ ಕಾರಣಗಳಿರುತ್ತವೆ. ಮಳೆಗಾಲದ ಮೊದಲ ಹನಿಗಳು ಧರೆಗುರುಳುತ್ತಿರುವಾಗ ಮೂಗಿಗೆ ಅಡರುತ್ತಿದ್ದ ಆ ಮಣ್ಣಿನ ಪರಿಮಳ, ಗಣೇಶ ಚತುರ್ಥಿ ಬಂತೆಂದರೆ ಕೇಳಿಬರುತಿದ್ದ ಹಾಡುಗಳು, ಹಾಫ್ ಪ್ಯಾಂಟು ಹಾಕಿಕೊಂಡು ಗುಂಡಾ, ಚಿಣಿ ಫಣಿ, ಲಗ್ಗೋರಿಗಳೆಂಬ ಆಟ ಅಡಲು ಬರುತ್ತಿದ್ದ ಅಕ್ಕರೆಯ ಚಡ್ಡಿ ದೋಸ್ತರು, "ಕಾಮಣ್ಣನ ಮಕ್ಕಳು ಕಳ್ಳ ಸೂ.. ಮಕ್ಕಳು" ಅಂತ ಹಾಡುತ್ತ ಮಾಡಿದ ಸಣ್ಣ ಪುಟ್ಟ ಕಳುವುಗಳು, ಕನ್ನಡವನ್ನು ಹೇಳಿಕೊಟ್ಟ ಕನ್ನಡ ಸಾಲಿಯ ಪೂಜ್ಯ ಗುರುಗಳು, ನಾಕಾಣೆಗೆ ಒಂದು ತಾಸು ಅಂತ ವಿಶ್ರಾಂತಿಯಿಲ್ಲದೇ ಓಡಿಸುತ್ತಿದ್ದ ಸೈಕಲ್ಲು, ರಕ್ಕಸ ಗಾತ್ರದ ಹುಣಸೆ ಹಾಗು ಬೇವಿನ ಮರಗಳು, ಕಲ್ಲಿನ ಪುರಾತನ ದೇವಾಲಯಗಳು, ಜೀನಾಲಯಗಳು, ಮಸೀದಿಗಳು ಹೀಗೆ ಒಂದೆ ಎರಡೆ? ಇವೆಲ್ಲವುಗಳ ಜೊತೆಗೆ ಹಲವಾರು ಹಬ್ಬ ಹರಿದಿನಗಳನ್ನು ಆಚರಿಸಿ, ಸಂಭ್ರಮಿಸಿ ಎಷ್ಟೋ ವಸಂತಗಳನ್ನು ಕಳೆದ ನಮ್ಮ ಪ್ರೀತಿಯ ಲಕ್ಷ್ಮೇಶ್ವರದ ಈ ಎಲ್ಲ ವಿಶೇಷಗಳನ್ನು, ನೆನಪುಗಳನ್ನು ಒಂದು ಕಡೆ ಒಪ್ಪವಾಗಿ ಜೋಡಿಸಿಡುವ ಪ್ರಯತ್ನವೇ ಈ ತಾಣ! 

ಅಂದ ಹಾಗೆ, ನಮ್ಮ ಪ್ರೀತಿಯ ಊರಿನ ಬಗ್ಗೆ ಅಭಿಮಾನವಿಟ್ಟುಕೊಂಡಿರುವ ಗೆಳೆಯರನ್ನೆಲ್ಲ ಒಟ್ಟಿಗೆ ಸೇರಿಸುವ Facebook Page ಇಲ್ಲಿದೆ - https://www.facebook.com/groups/111623102370193/